RESOURCES





·      ಗುರುದೇವ ರವೀಂದ್ರನಾಥ್ ಟಾಗೋರ್ ರವರು ಬರೆದ ಜನ ಗಣ ಮನ ಗೀತೆಯನ್ನು ಜನವರಿ 24, 1950 ರಲ್ಲಿ ಭಾರತ ಸರಕಾರವು ’ರಾಷ್ಟ್ರಗೀತೆ’ಯೆಂದು ಘೋಷಿಸಿತು.
·      ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯ.
·      ಈ ನಮ್ಮ ಭೂಮಿತಾಯಿಯ ಗೀತೆ ಕೇಳಿ ಬಂದ ತಕ್ಷಣ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು.
·      ರಾಷ್ಟ್ರಗೀತೆ ಮುಗಿಯುವ ತನಕ ನಿಶ್ಯಬ್ಧವಾಗಿರಬೇಕು.
·      ರಾಷ್ಟ್ರಗೀತೆಯನ್ನು 52 ಸೆಕುಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು.
·      ರಾಷ್ಟ್ರಗೀತೆ ಹಾಡುವುದಕ್ಕೆ ಅಡ್ಡಿಪಡಿಸಿದರೆ ನಮ್ಮ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುವುದು.

ರಾಷ್ಟ್ರಗೀತೆಯ ಭಾವಾರ್ಥ
ಜನ ಸಮೂಹದಮನಸ್ಸಿಗೆ ಒಡೆಯನಾದ
ಸರ್ವೋಚ್ಛ ನಾಯಕನೇ ಭಾರತದ ಅದೃಷ್ಟವನ್ನು
ದಯಪಾಲಿಸುವವನೇ ನಿನಗೆ  ಜಯವಾಗಲಿ.
ಪಂಜಾಬ, ಸಿಂಧು,ಗುಜರಾತ್, ಮಹಾರಾಷ್ಟ್ರ, ದಕ್ಷಿಣ ಭಾರತ,
ಒರಿಸ್ಸಾ,ಬಂಗಾಳ, ಹೀಗೆ ಭಾರತದ ನಾಲ್ಕೂ ದಿಕ್ಕಿನ
ಪ್ರಾಂತ್ಯಗಳು ವಿಂಧ್ಯ, ಹಿಮಾಚಲ ಪರ್ವತಗಳು ಹಾಗೇ
ಗಂಗಾ, ಯಮುನೆಯಂತಹ ಜೀವನದಿಗಳು
ಸಮುದ್ರದನೀರಿನ ಅಲೆಗಳು ನಿನ್ನ ಮಂಗಳಕರವಾದ
ಹೆಸರನ್ನು ಕೇಳಿ ಜಾಗೃತಗೊಳ್ಳುತ್ತವೆ.ನಿನ್ನ
ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ
ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ. ಜನಸಮೂಹಕ್ಕೆ
ಒಳ್ಳೆಯದನ್ನು ಅನುಗ್ರಹಿಸುವವನೆ
ನಿನಗೆ ಜಯವಾಗಲಿ,ಜಯವಾಗಲಿ.
ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ
     ಜಯವಾಗಲಿ.......
ರಾಷ್ಟ್ರಗೀತೆಯ  ಶಬ್ಧಾರ್ಥ

ಜನ= ಈ ಪುಣ್ಯ ಭೂಮಿ ಭಾರತ ದೇಶದಲ್ಲಿ ಹುಟ್ಟಿದ ಪ್ರಜೆಗಳಾದ ನಾವುಗಳು.
ಗಣ= ಗುಂಪು, ಪಂಗಡ,ಭಾರತೀಯರಾದ ನಾವೆಲ್ಲಾ ಒಂದೇ ಜಾತಿ,ಒಂದೇ ಮತ, ಒಂದೇ ಧರ್ಮ ಎಂದು ಸಾರುವ ಸಮೂಹ.
ಮನ= ಮನಸ್ಸು, ಚಿತ್ತ,ಅಂತರಂಗ.
ಅಧಿನಾಯಕ= ಒಡೆಯ, ಯಜಮಾನ, ಸರ್ವೋಚ್ಛನಾಯಕ
ಜಯಹೇ= ಜಯವಾಗಲಿ
ಭಾರತ= ನಾವು ವಾಸಿಸುವ ನೆಲವೇ ನಮ್ಮ ದೇಶ. ಅದುವೇ ಭಾರತ.
           ಕೃತ ಯುಗದಲ್ಲಿ ವಿಷ್ಣುವಿನ ಅವತಾರವಾದ ವೃಷಭನ ಮಗ ಭರತನು ಆಳಿದ್ದರಿಂದ ಭರತವರ್ಷವೆನಿಸಿತು.
           ದುಷ್ಯಂತನ ಮಗ ಭರತನು ಆಳಿದ್ದರಿಂದ ಭರತಖಂಡವಾಯಿತು.
           ಋಷಭ ತೀರ್ಥಂಕರನ ಮಗನಾದ ಭರತ ಚಕ್ರವರ್ತಿ ಆಳಿದ್ದರಿಂದ ಭಾರತವೆಂಬ ಹೆಸರು ಬಂತು ಎಂದು ಪುರಾಣ         ಕಥೆಗಳು ಹೇಳುತ್ತವೆ.
ಭಾಗ್ಯ ವಿಧಾತ= ಅದೃಷ್ಟವನ್ನು ದಯಪಾಲಿಸುವವ. ಬೇಡಿದ್ದನ್ನು ಕರಣಿಸುವವ,ಬ್ರಹ್ಮ
ಪಂಜಾಬ= ಪಂಚ ನದಿಗಳು ಹರಿಯುವ ನಾಡೇ ಪಂಜಾಬ. ನಮ್ಮ ದೇಶದ ವಾಯುವ್ಯ ಪ್ರಾಂತ್ಯವನ್ನು ಸೂಚಿಸುವ ರಾಜ್ಯ.
ಸಿಂಧು= ಸಿಂಧು ಎಂದರೆ ಸಂಸ್ಕೃತದಲ್ಲಿ ರಾಶಿ ಎನ್ನುವ ಶಬ್ದವಿದೆ.ಅಂದರೆ ಒಟ್ಟಾಗು.
          ಜನಾಬ, ಸತಲಜ್, ಜೆಹಲಂ, ಬಿಯಾಸ್, ಮತ್ತು ರಾವಿ ಈ ಐದು ನದಿಗಳು ಒಟ್ಟಾಗಿ ಸೇರಿ ಸಮುದ್ರದ ಹಾಗೆ ಕಾಣುವುದನ್ನು ಸಿಂಧು ಎಂದರು.
      ಸಿಂಧು: ಒಂದು ನದಿಯ ಹೆಸರು. ನಮ್ಮ ದೇಶದ ನಾಗರೀಕತೆಯ ಮೂಲ ಪ್ರದೇಶ.
ಗುಜರಾತ= ನಮ್ಮ ದೇಶದ  ಪಶ್ಚಿಮ ಪ್ರಾಂತ್ಯವನ್ನು ಸೂಚಿಸುವ ಇನ್ನೊಂದು ರಾಜ್ಯ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳ.
ಮರಾಠಾ= ಮಹಾರಾಷ್ಟ್ರ ರಾಜ್ಯ. ನಮ್ಮ ದೇಶದ  ಪಶ್ಚಿಮ ಪ್ರಾಂತ್ಯವನ್ನು ಸೂಚಿಸುವ ಮತ್ತೊಂದು ರಾಜ್ಯ.ಮರಾಠಿಗರು ಹೆಚ್ಚಾಗಿರುವ ಈ ಪ್ರದೇಶವನ್ನು ಮಹಾರಾಷ್ಟ್ರವೆನ್ನುತ್ತಾರೆ.
ದ್ರಾವಿಡ= ನಮ್ಮ ದೇಶದ  ದಕ್ಷಿಣ ದಿಕ್ಕಿನಲ್ಲಿರುವ ನಾಲ್ಕು ರಾಜ್ಯಗಳನ್ನು ದ್ರಾವಿಡ ರಾಜ್ಯಗಳೆನ್ನುತ್ತಾರೆ.(ಕರ್ನಾಟಕ, ಆಂದ್ರ ಪ್ರದೇಶ, ತಮಿಳುನಾಡು, ಕೇರಳ)
        ದ್ರಾವಿಡ ಎಂಬುದು ದಟ್ತವಾದ ಕಾಡು,ಬೆಟ್ಟ,ಗುಡ್ಡ, ನದಿಗಳಂತ ಪ್ರದೇಶಗಳನ್ನು ಸೂಚಿಸುವಂತಹ ಸಂಸ್ಕೃತ ಭಾಷೆಯಲ್ಲಿ ಬಳಕೆಯಲ್ಲಿರುವ ಶಬ್ದ.
ಉತ್ಕಲ= ಅಂದರೆ ಒರಿಸ್ಸಾ ರಾಜ್ಯ. ನಮ್ಮ ದೇಶದ  ಪೂರ್ವದ ಪ್ರಾಂತ್ಯವನ್ನು ಸೂಚಿಸುವ ರಾಜ್ಯ.
ವಂಗಾ= ಪಶ್ಚಿಮ ಬಂಗಾಳ. ಇದು ನಮ್ಮ ದೇಶದ  ಪೂರ್ವದ ಪ್ರಾಂತ್ಯವನ್ನು ಸೂಚಿಸುವ ಇನ್ನೊಂದು ರಾಜ್ಯ.
ವಿಂಧ್ಯ= ಇದೊಂದು ಪರ್ವತ ಶ್ರೇಣಿ. ಉತ್ತರದಲ್ಲಿ ಮಾಳ್ವ ಪ್ರಸ್ಥಭೂಮಿ, ದಕ್ಷಿಣದಲ್ಲಿ ನರ್ಮದಾ ನದಿಯ ಸೀಳು ಕಣಿವೆಯ ನಡುವೆ ತಪತಿ ನದಿಯಂತಹ ಹಲವು ಜೀವ ನದಿಗಳ ಉಗಮ ಸ್ಥಾನವಾಗಿದೆ ಈ ವಿಂಧ್ಯ ಪರ್ವತ.
ಹಿಮಾಚಲ= ಇದು ಕೂಡಾ ಒಂದು ಪರ್ವತ ಶ್ರೇಣಿ. ಅಂದರೆ ಹಿಮಾಲಯ: ಹಿಮದ ಮನೆ ಎಂದು ಅರ್ಥ.ಹಿಮದಿಂದ ಕೂಡಿದ ಪ್ರದೇಶ.ಹಿಮಾಲಯ ಪರ್ವತ ಶ್ರೇಣಿಗಳು 1500 ಮೈಲಿಯಷ್ಟು ಉದ್ದವಾಗಿದ್ದು 100 ರಿಂದ 150 ಮೈಲಿಯಷ್ಟು ಅಗಲವಾಗಿದೆ. ಮೌಂಟ್ ಎವರೆಷ್ಟ್ ಈ ಹಿಮಾಲಯ ಪ್ರದೇಶದ ಪ್ರಮುಖ ಶಿಖರ ಹಾಗೂ ಹಲವಾರು ಜೀವನದಿಗಳ ಉಗಮ ಸ್ಥಾನವಾಗಿದೆ.(ಪ್ರಾಕೃತಿಕವಾಗಿ ನಮ್ಮ ದೇಶವನ್ನು ಕಾಯುವುದು ಹಿಮಾಲಯ ಪರ್ವತಗಳು)
ಯಮುನಾ= ಇದೊಂದು ನದಿ.ಯಮುನೋತ್ರಿ ಎಂಬಲ್ಲಿ ಹುಟ್ಟುವುದರಿಂದ ಇದನ್ನು  ಯಮುನಾ ನದಿ ಎನ್ನುತ್ತಾರೆ. ಇದು ಗಂಗಾ ನದಿಯ ಅತ್ಯಂತ ದೊಡ್ಡ ಉಪನದಿಯಾಗಿದೆ.(ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಈ ನದಿಯ ತಟದಲ್ಲಿದೆ)
ಗಂಗಾ= ಇದು ಕೂಡಾ ಒಂದು ಪವಿತ್ರವಾದ ನದಿ.ಹಿಮಾಲಯ ಪರ್ವತದ ಮೇಲೆ ಮಾನಸ ಸರೋವರದ ಬಳಿ ಗಂಗೋತ್ರಿ ಎಂಬಲ್ಲಿ ಹುಟ್ಟಿ ಭಾಗೀರಥ ಮತ್ತು ಅಲಕಾನಂದ ಎಂಬ ಎರಡು ತೊರೆಗಳ ಹೆಸರಿನಿಂದ ಆರಂಭವಾಗಿ ಹರಿದ್ವಾರ ಎಂಬಲ್ಲಿ ಈ ಎರಡು ತೊರೆಗಳು ಸೇರಿದ ನಂತರ  ಗಂಗಾ ನದಿ ಎಂದು ಕರೆಸಿಕೊಳ್ಳುತ್ತದೆ.ಈ ನದಿಗೆ ಹಲವಾರು ಉಪನದಿಗಳಿದ್ದು ನಮ್ಮ ದೇಶದ ಪ್ರಮುಖ ಜೀವನದಿಯಾಗಿದೆ.
ಉಚ್ಚಲ= ಮೇಲಕ್ಕೆ ಚಿಮ್ಮುವ, ಉನ್ನತವಾದ
ಜಲಧಿ ತರಂಗ= ಸಮುದ್ರದ ನೀರಿನ ಅಲೆಗಳ ತರಂಗ
ತವ= ನಿನ್ನ
ಶುಭ= ಮಂಗಳಕರವಾದದ್ದು, ಒಳ್ಳೆಯದು.
ನಾಮೇ= ಹೆಸರು, ದಾಖಲೆ
ಜಾಗೇ= ಜಾಗ್ರುತವಾಗು, ಎಚ್ಚರಗೊಳ್ಳು
ತವ= ನಿನ್ನ
ಶುಭ= ಮಂಗಳಕರವಾದದ್ದು, ಒಳ್ಳೆಯದು
ಆಶಿಸ= ಆಶೀರ್ವಚನ, ಇಷ್ಟವಾದದ್ದನ್ನು ಪ್ರಾರ್ಥಿಸುವ ವಾಕ್ಯ. ಹಿತವನ್ನು ಕೋರುವ ಮಾತು.
ಮಾಗೇ= ಕೇಳಿಕೊಳ್ಳುವುದು
ಗಾಹೇ= ಹಾಡಲ್ಪಡಲಿ, ಕೊಂಡಾಡಲಿ
ತವ= ನಿನ್ನ
ಜಯಗಾಥಾ= ಗೆಲುವಿನ ಹಾಡು, ವಿಜಯದ ಗೀತೆ,ಶ್ಲೋಕ, ಪದ್ಯ, ಗಾನ.
ಜನ= ಈ ಪುಣ್ಯ ಭೂಮಿ ಭಾರತ ದೇಶದಲ್ಲಿ ಹುಟ್ಟಿದ ಪ್ರಜೆಗಳಾದ ನಾವುಗಳು.
ಗಣ= ಗುಂಪು, ಪಂಗಡ,ಭಾರತೀಯರಾದ ನಾವೆಲ್ಲಾ ಒಂದೇ ಜಾತಿ,ಒಂದೇ ಮತ, ಒಂದೇ ಧರ್ಮ ಎಂದು ಸಾರುವ ಸಮೂಹ.
ಮಂಗಳದಾಯಕ= ಒಳ್ಳೆಯದನ್ನು ದಯಪಾಲಿಸುವವನು,ಶುಭವನ್ನು ಅನುಗ್ರಹಿಸುವವನು.
ಜಯಹೇ= ಜಯವಾಗಲಿ.
ಭಾರತ ಭಾಗ್ಯ ವಿಧಾತಾ= ಅದೃಷ್ಟವನ್ನು ದಯಪಾಲಿಸುವವನು, ಬೇಡಿದ್ದನ್ನು ಕರುಣಿಸುವವನು, ಬ್ರಹ್ಮಾ.
ಜಯಹೇ..ಜಯಹೇ..ಜಯಹೇ..= ಜಯವಾಗಲಿ...ಜಯವಾಗಲಿ...ಜಯವಾಗಲಿ
ಜಯ ಜಯ ಜಯ ಜಯಹೇ = ಗೆಲುವಾಗಲಿ, ಜಯವಾಗಲಿ
   






No comments: